ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್-
ಭಾರತದ ಕೇಂದ್ರ ಕಾರ್ಮಿಕ ಸಂಸ್ಥೆಗಳಲ್ಲೊಂದು. 1947ರಲ್ಲಿ ಪ್ರಾರಂಭವಾಯಿತು. ಮೊದಲಲ್ಲಿ 35 ಸಂಸ್ಥೆಗಳ ಸದಸ್ಯತ್ವವಿದ್ದ ಈ ಸಂಸ್ಥೆಗೆ ಕ್ರಮೇಣ 1,57,000 ಕಾರ್ಮಿಕರು ಸದಸ್ಯರಾಗಿದ್ದರು. ಇದಕ್ಕೆ ಪ್ರಾರಂಭದಿಂದಲೂ ಕಾಂಗ್ರೆಸ್ ಸಂಸ್ಥೆಯ ಬೆಂಬಲ ಹಾಗೂ ಪ್ರೋತ್ಸಾಹವಿದೆ. 1948ರಲ್ಲಿ ಕಾಂಗ್ರೆಸ್‍ನಿಂದ ಬೇರ್ಪಟ್ಟ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯವರು ಹಿಂದ್ ಮಜದೂರ್ ಸಭಾ ಎಂಬ ಮತ್ತೊಂದು ಕಾರ್ಮಿಕ ಸಂಸ್ಥೆಯನ್ನು ಸ್ಥಾಪಿಸಿಕೊಂಡರು. 1963ರಲ್ಲಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸಿನ ಸದಸ್ಯ ಸಂಸ್ಥೆಗಳು 1,219 ಇದ್ದು ಸದಸ್ಯರ ಸಂಖ್ಯೆ 12.7 ಲಕ್ಷವಿತ್ತು.

	ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಸಂಸ್ಥೆಯ ಪ್ರಾಣಾಳಿಕೆಯ ಪ್ರಕಾರ ಅದರ ಮುಖ್ಯ ಗುರಿಗಳಿವು: ಎಲ್ಲ ವರ್ಗದ ಕಾರ್ಮಿಕರಿಗೂ ಒಂದು ಸಂಘಟಿತ ಸಂಸ್ಥೆಯನ್ನೊದಗಿಸಿಕೊಡುವುದು; ಉದ್ಯಮ ರಂಗದಲ್ಲಿ ಹಾಗೂ ಸಮಾಜದಲ್ಲಿ ಕಾರ್ಮಿಕರಿಗೆ ಸ್ಥಾನಮಾನ ಕಲ್ಪಿಸಿ ಅವರ ಜೀವನಮಟ್ಟವನ್ನು ಉತ್ತಮಗೊಳಿಸುವುದು; ಉತ್ಪಾದನೆಗೆ ತೊಂದರೆ ಬರದಂತೆ, ಮುಷ್ಕರ ಮಾಡದೆ ಉದ್ಯಮಪತಿಗಳೊಡನೆ ಚರ್ಚೆ, ಸಂಧಾನಗಳ ಮೂಲಕ ಕಾರ್ಮಿಕರಿಗಿರುವ ತೊಂದರೆಗಳನ್ನು ಪರಿಹರಿಸಲು ಯತ್ನಿಸುವುದು; ಕಾರ್ಮಿಕರಲ್ಲಿ ಸಮೂಹ ಹಾಗೂ ಉದ್ಯಮಗಳಿಗೆ ಸಂಬಂಧಿಸಿದಂತೆ ಜವಾಬ್ದಾರಿಯುತರಾಗಿ ನಡೆದುಕೊಳ್ಳುವ ಮನೋಭಾವವನ್ನುಂಟು ಮಾಡುವುದು ಮತ್ತು ಕಾರ್ಮಿಕರ ಉತ್ಪಾದಕತೆ ಹಾಗೂ ಶ್ರದ್ಧೆಯನ್ನು ವೃದ್ಧಿಸುವುದು.

	ಈ ಗುರಿಗಳನ್ನು ಶಾಂತಿಯುತ ಮಾರ್ಗಗಳಿಂದ ಸಾಧಿಸುವುದು ಈ ಸಂಸ್ಥೆಯ ಉದ್ದೇಶ. ಕಾಂಗ್ರೆಸ್ ಸಂಸ್ಥೆಗಳೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡಿರುವ ಈ ಸಂಸ್ಥೆ ಸರ್ಕಾರದ ಪಂಚವಾರ್ಷಿಕ ಯೋಜನೆಗಳಿಗೆ ನೇರ ಬೆಂಬಲವನ್ನು ಕೊಡುವ ಭರವಸೆ ಕೊಟ್ಟಿದೆ.												
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ